ಪಾಟೀಲ್, ವೀರೇಂದ್ರ
1924-97. ನ್ಯಾಯವಾದಿ ರಾಜಕಾರಣಿ ; ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ. ಭಾರತದ ಕೇಂದ್ರ ಸಂಪುಟ ಮಂತ್ರಿ. ಹಿಂದಿನ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ಗುಲ್ಬರ್ಗ ಜಿಲ್ಲೆಯ ಚಿಂಚೋಳಿಯಲ್ಲಿ 1924ರ ಫೆಬ್ರವರಿ 6 ರಂದು ಹುಟ್ಟಿದರು. ಉಸ್ಮಾನಿಯ ವಿಶ್ವವಿದ್ಯಾಲಯದ ನ್ಯಾಯಶಾಸ್ತ್ರ ಪದವೀಧರರಾಗಿ, 1947ರಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು. ಸ್ವಲ್ಪಕಾಲದಲ್ಲೇ ಅದನ್ನು ತ್ಯಜಿಸಿ ರeóÁಕಾರ್ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದರು. ಹೈದರಾಬಾದಿನ ವಿಮೋಚನೆಗಾಗಿ ಕೇಂದ್ರಸರ್ಕಾರ ನಡೆಸಿದ ಪೋಲೀಸ್ ಕಾರ್ಯಾಚರಣೆಯ ಅನಂತರ ಪೂರ್ಣಾವಧಿಯ ಕಾಂಗ್ರೆಸ್ ಕಾರ್ಯಕರ್ತರಾದರು. ಭಾಷಾನುಗುಣ ರಾಜ್ಯ ಪುನರ್ರಚನೆಯ ಕಾಲದವರೆಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1950ರಲ್ಲಿ ಮತ್ತೆ ವಕೀ6ಲವೃತ್ತಿಯಲ್ಲಿ ತೊಡಗಿ, 1955ರಲ್ಲಿ ಕಾಂಗ್ರೆಸ್ ಸಂಸ್ಥೆಯನ್ನು ಭದ್ರಗೊಳಿಸುವುದಕ್ಕಾಗಿ ಮತ್ತೆ ಅದನ್ನು ಬಿಟ್ಟರು. ಹೈದರಾಬಾದ್ ರಾಜ್ಯದ ಪ್ರಥಮ ಸಾರ್ವಜನಿಕ ಚುನಾವಣೆಯಲ್ಲಿ ಅಲಂದ್ ಚುನಾವಣಾ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಹೊಂದಿದರು. ಹೈದರಾಬಾದ್ ಗೇಣಿದಾರಿ ಕೃಷಿ ಕಾನೂನು  ಸಮಿತಿಯೇ ಮುಂತಾದ ಅನೇಕ ಸಮಿತಿಗಳ ಸದಸ್ಯರಾಗಿದ್ದರು. ವಿಶಾಲ ಮೈಸೂರು ರಾಜ್ಯ ನಿರ್ಮಾಣವಾದ ಮೇಲೆ, 1957ರಲ್ಲಿ ಚಿಂಚೋಳಿ ಕ್ಷೇತ್ರದಿಂದ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಚುನಾಯಿತರಾದರು. 1960ರವರೆಗೆ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯ ವ್ಯವಸ್ಥಾಪಕ ಕಾರ್ಯದರ್ಶಿಯೂ 1960-61ರಲ್ಲಿ ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೂ ಆಗಿದ್ದರು. 1957ರ ಏಪ್ರಿಲ್‍ನಿಂದ 1958ರ ಮೇ 16ರ ವರೆಗೆ ಮೈಸೂರು (ಈಗ ಕರ್ನಾಟಕ) ರಾಜ್ಯದ ಗೃಹ ಮತ್ತು ಕೈಗಾರಿಕಾ ಖಾತೆಗಳ ಉಪ ಮಂತ್ರಿಯಾಗಿದ್ದರು. 1961ರ ಫೆಬ್ರವರಿಯಿಂದ 1962ರ ಮಾರ್ಚ್ ವರೆಗೆ ಅಬಕಾರಿ, ಪಾನನಿರೋಧ ಮತ್ತು ಗ್ರಾಮೀಣ ಕೈಗಾರಿಕಾ ಖಾತೆಗಳ ಮಂತ್ರಿಯಾಗಿದ್ದರು. 1962ರಿಂದ 1967ರವರೆಗಿನ ಅವಧಿಗೆ ಮತ್ತೆ ವಿಧಾನಸಭೆಗೆ ಚುನಾಯಿತರಾಗಿ ಲೋಕೋಪಯೋಗಿ ಮತ್ತು ವಿದ್ಯುತ್ ಇಲಾಖೆಗಳ ಮಂತ್ರಿಯಾದರು. 1967ರ ಚುನಾವಣೆಗಳಲ್ಲಿ ಮತ್ತೆ ಆಯ್ಕೆಹೊಂದಿದ ಪಾಟೀಲರು ಲೋಕೋಪಯೋಗಿ ಇಲಾಖೆಯ ಮಂತ್ರಿಯಾದರು. ಮುಖ್ಯ ಮಂತ್ರಿಯಾಗಿದ್ದ ಎಸ್. ನಿಜಲಿಂಗಪ್ಪನವರು ಕಾಂಗ್ರೆಸ್ ಅಧ್ಯಕ್ಷರಾದಾಗ ಅವರ ಸ್ಥಾನದಲ್ಲಿ 1968ರ ಮೇ 23ರಂದು ಪಾಟೀಲರು ಕಾಂಗ್ರೆಸ್ ವಿಧಾಯಕ ಪಕ್ಷದ ನಾಯಕರಾಗಿ ಆಯ್ಕೆಗೊಂಡು ಮುಖ್ಯಮಂತ್ರಿಯ ಪದವಿಯನ್ನು ವಹಿಸಿಕೊಂಡರು.

1969ರಲ್ಲಿ ಕಾಂಗ್ರೆಸ್ ಸಂಸ್ಥೆ ಒಡೆದಾಗ ಇವರು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಮುಂದುವರಿದ ಸಂಸ್ಥಾ ಕಾಂಗ್ರೆಸ್‍ನಲ್ಲಿ ಮುಂದುವರಿದರು. ವಿಧಾನಸಭೆಯಲ್ಲಿ ಇವರ ಪಕ್ಷಕ್ಕೆ ಇದ್ದ ಬಹುಮತ ಕಳೆದುಹೋದಾಗ ಇವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಅನಂತರ ಇವರು ರಾಜ್ಯಸಭೆಯ ಸದಸ್ಯರಾಗಿದ್ದರು. 1977ರಲ್ಲಿ ಸಂಸ್ಥಾ ಕಾಂಗ್ರೆಸ್ ಮತ್ತು ಇತರ ಕೆಲವು ವಿರೋಧ ಪಕ್ಷಗಳು ಸೇರಿ ಜನತಾ ಪಕ್ಷವನ್ನು ಪ್ರಾರಂಭಿಸಿದಾಗ ಇವರು ಆ ಪಕ್ಷದಲ್ಲಿ ಸೇರಿದರು. ಸ್ವಲ್ಪಕಾಲ ಅದರ ಪ್ರಾದೇಶಿಕ ಘಟಕದ ಅಧ್ಯಕ್ಷರಾಗಿದ್ದರು. 1978ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ವಿರುದ್ಧ ಜನತಾಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು.  1979ರಲ್ಲಿ ಇವರು ಜನತಾಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಂದಿರಾ ನೇತೃತ್ವದ ಕಾಂಗ್ರೆಸ್ (ಐ)ಪಕ್ಷವನ್ನು ಸೇರಿದರು. 1980ರಲ್ಲಿ ಲೋಕಸಭೆಗೆ ನಡೆದ ಚುನಾವಣೆಗಳಲ್ಲಿ ಈ ಪಕ್ಷದ ಸದಸ್ಯರಾಗಿ ಸ್ಪರ್ಧಿಸಿ ಗೆದ್ದರು. ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ಸಂಪುಟ ಸಚಿವರಾದರು. ಮುಂದೆ ಕರ್ನಾಟಕ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿ 1989ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷ ಬಹುಮತಗಳಿಸುವಂತೆ ಮಾಡುವುದರಲ್ಲಿ ಯಶಸ್ವಿಯಾದರು. 1989 ನವೆಂಬರ್ 30ರಿಂದ 1990 ಅಕ್ಟೋಬರ್ 10 ರವರೆಗೆ ಎರಡನೆಯ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇವರು 1997 ಮಾರ್ಚ್‍ನಲ್ಲಿ ನಿಧನರಾದರು.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ